ಬಾಲ್ಯದ ಕಥೆ
ಅದೊಂದು ಸೋಮವಾರ, ಎಂದಿನಂತೆ ಬಿಡುವಿಲ್ಲದ ಕೆಲಸ. ಮಗನ ಆನ್ ಲೈನ್ ತರಗತಿ ಪ್ರಾರಂಭವಾಗಲು ೧೦ ನಿಮಿಷ ಇದೆ. ಆದರೆ ಪುಸ್ತಕ ಸಿಗುತ್ತಿಲ್ಲ. ಅಥರ್ವಾ ನಿನಗೆ ಒಂದು ಚೂರು ಜವಾಬ್ದಾರಿ ಇಲ್ಲಾ ಎಂದು ಗೊಣುಗುತ್ತಾ ಕಪಾಟಿಗೆ ಕೈ ಹಾಕಿದಾಗ ಏನೋ ಚುಚ್ಚಿದಂತ ಅನುಭವ. ಏನೆಂದು ನೋಡಿದರೆ ಮೂಲೆಯಲ್ಲಿ ಬಣ್ಣ ಮಾಸಿದ ಒಂದು ಬುಗುರಿ, ಮೊಳೆ ತುಕ್ಕು ಹಿಡಿದಿತ್ತು. ಸುಮಾರು ೨೫ ವರ್ಷಗಳ ಹಿಂದೆ ಅಪ್ಪ ಕುದೂರು ಜಾತ್ರೆಯಲ್ಲಿ ಕೊಡಿಸಿದ್ದ ನೆನಪು.
ಬೆಳಗಿನ ಜಾವದ ಮಳೆಯ ಪ್ರಭಾವವೋ ಏನೋ ಮನಸ್ಸು ವಾಸ್ತವ ಬಿಟ್ಟು ಬಾಲ್ಯದ ಬಸ್ಸು ಏರಿತು.
ಶಾಲೆಯ ಆ ದಿನಗಳನ್ನು ಮೆಲಕು ಹಾಕುತ್ತಿದ್ದಾಗ ಕಣ್ಣ ಮುಂದೆ ಬಂದಿದ್ದು ನೀಲಿ ಲಂಗ , ಬಿಳಿ ಅಂಗಿ , ಕೈಯಲ್ಲಿ ಒಂದು ಬ್ಯಾಗು, ಆ ಬ್ಯಾಗಿನ ತುಂಬಾ ಗೋಲಿ, ಬುಗುರಿ, ಕಲ್ಲು ಕಸ!
ಶಾಲೆಯ ಘಂಟೆ ಬಾರಿಸಿದ್ದೆ ತಡ ಮೈದಾನದತ್ತ ಮುಖ ಮಾಡಿ ಗೋಲಿ, ಲಗೋರಿ, , ಕಬ್ಬಡಿ ಆಟ ಆಡಿ ನಲಿದಿದ್ದೆವು. ಅದರಲ್ಲೂ ರಜಾ ದಿನಗಳೆಂದರೆ ಮನೆಯಲ್ಲಿ ಎಷ್ಟೇ ಕೆಲಸ ಇರಲಿ ಮರ ಕೋತಿ ಆಟಕ್ಕೆ ಹಾಜರ್. ಬಿರು ಬಿಸಿಲು ನಮಗೆ ಯಾವ ಲೆಕ್ಕವೇ ಇರಲಿಲ್ಲ.
ಗಣರಾಜ್ಯೋತ್ಸವ , ಸ್ವಾತಂತ್ರ್ಯ ದಿನಾಚರಣೆಗಳಂದು ಧ್ವಜಾರೋಹಣ ದ ನಂತರ ಸಾಲಾಗಿ ನಿಂತು ಲಾಡು ಪಡೆಯುತ್ತಿದ್ದ ದಿನಗಳು ಕಣ್ಮುಂದೆ ಹಾದು ಹೋಗಿತ್ತು.
ಊರ ಜಾತ್ರೆಯಲ್ಲಿ ಅಪ್ಪನ ಬೆನ್ನೇರಿ ಕೂತು ಪುಟ್ಟ ಕಣ್ಣುಗಳನ್ನು ಇಷ್ಟಗಲ ಅರಳಿಸಿ ಇಡೀ ಜಾತ್ರೆ ನೋಡಿದ ನೆನಪು.
ಕಾಲಚಕ್ರದಲ್ಲಿ ಮನುಷ್ಯ ಒಂದು ಯಂತ್ರದಂತೆ ಕಾಲ ನಿರ್ವಹಿಸುತ್ತಾ ಹೋಗುತ್ತಾನೆ. ಆದರೂ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಅದೇ ನಮ್ಮ ಬಾಲ್ಯ ಜೀವನ.
೨೫ ವರ್ಷ ಕಳೆದರೂ ಆ ದಿನಗಳ ಸ್ವಚ್ಚಂದ ಜೀವನ ನೆನೆದು ಕಣ್ಣಂಚಲ್ಲಿ ನೀರು ಬಂತು. ಮೈಮರೆತು ನಿಂತ ನನ್ನನ್ನು ಕಂಡು ನನ್ನ ಮಗ, ಅಮ್ಮ ಆನ್ಲೈಲ್ ಕ್ಲಾಸ್ ಇದೆ , ಬುಕ್ ಸಿಕ್ತಾ ಅಂದ!
By, Akshatha Kulkarni, Kannada Teacher, Ekya BTM