ಎಲ್ಲರಿಗೂ ನಮಸ್ಕಾರ !

ಈ ದಿನ ನನ್ನನ್ನು ಕಾಡುತ್ತಿರುವ ಸಮಸ್ಯೆ ಏನೆ೦ದು ಊಹಿಸಬಲ್ಲಿರ?ಈ ಪ್ರಶ್ನೆ ಪ್ರಪ೦ಚದ ವಿಜ್ಞಾನಿಗಳನ್ನೆಲ್ಲಾ
ಕಾಡುತ್ತಿದೆ.ಭೂವಿಜ್ಞಾನಿಗಳೂ ಕೂಡ ಇದೇ ಸಮಸ್ಯೆಗೆ ತಲೆ ಕೆಡಸಿಕೊಳ್ಳುತ್ತಿದ್ದಾರೆ.
ಈ ಸಮಸ್ಯೆಯ ಹೆಸರು ”ಜಾಗತಿಕ ತಾಪಮಾನ ಏರಿಕೆ”.
ಕರೋನ ಮಹಾಮಾರಿಗಿ೦ತಲೂ ಭಯ೦ಕರ ಸಮಸ್ಯೆ ಇದು.ಆದರೂ  ಇದಕ್ಕೆ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ.
ಎಳ್ಳಷ್ಟೂ ಇಲ್ಲ!!
“ಜಾಗತಿಕ ತಾಪಮಾನ ಏರಿಕೆ” ಅ೦ದರೆ ಏನು?
ಭೂಮಿಯ ಉಷ್ಣತೆ ಏರುತ್ತ, ಭೂಮಿಯ ತಾಪಮಾನ ಏರುವುದನ್ನು ನಾವು ಜಾಗತಿಕ ತಾಪಮಾನ ಏರಿಕೆ ಎ೦ದು
ಕರೆಯುತ್ತೇವೆ .ಇಪ್ಪತ್ತನೆ ಶತಮಾನದ ಮಧ್ಯ ಭಾಗದಿ೦ದ ಶುರುವಾಗಿ ಈಗ ನಮ್ಮನ್ನು ಕಾಡುತ್ತಿರುವ ದೊಡ್ದ ಸಮಸ್ಯೆ ಇದು.

ಅಮೆರಿಕದ ನಾಸಾ ಸಂಸ್ಥೆಯ ಪ್ರಕಾರ ಭೂಮಿಯ ಸರಾಸರಿ ತಾಪಮಾನ ಕಳೆದ ಒಂದು ಶತಮಾನದಲ್ಲಿ 1 ಡಿಗ್ರಿ
ಸೆಲ್ಸಿಯಸ್‍ನಷ್ಟು ಹೆಚ್ಚಾಗಿದೆ.

ಈ ಸಮಸ್ಯೆಗೆ ಕಾರಣಗಳೇನು?
ಭೂಮಿಯ ತಾಪಮಾನ ಹೆಚ್ಚಾಗಲು ಪ್ರಮುಖ ಕಾರಣವೆಂದರೆ "ಹಸಿರುಮನೆ ಪರಿಣಾಮ". ಸೂರ್ಯನ ಕಿರಣಗಳು ಭೂಮಿಯ
ವಾತಾವರಣದ ಮೂಲಕ ಹೋಗುವಾಗ ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತವೆ. ಆದರೆ ಭೂಮಿ ಈ ಶಾಖವನ್ನು ಮತ್ತೆ
ಅಂತರಿಕ್ಷಕ್ಕೆ ಪ್ರಸರಿಸುತ್ತದೆ. ಈ ರೀತಿಯ ಮರು ಪ್ರಸರಣ ಭೂಮಿಯ ಉಷ್ಣತೆಯ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
ಆದರೆ ನೀರಿನ ಹಬೆ, ಇಂಗಾಲದ ಡೈ ಆಕ್ಸೈಡ್, ಮೀಥೇನ್, ಮತ್ತು ನೈಟ್ರಸ್ ಆಕ್ಸೈಡ್‍ನಂತಹ ಕೆಲವು ಅನಿಲಗಳು ಈ
ಉಷ್ಣತೆಯನ್ನು ಹೀರಿಕೊಂಡು ಭೂಮಿಯ ಉಷ್ಣತಾ ಮಟ್ಟವನ್ನು ಹೆಚ್ಚಿಸುತ್ತವೆ. ಇದನ್ನೇ ಹಸಿರುಮನೆ ಪರಿಣಾಮ ಎನ್ನುವುದು.
ಪರಿಸರ ಮಾಲಿನ್ಯ, ಪೆಟ್ರೋಲ್ ಪದಾರ್ಥಗಳ ಬಳಕೆ, ಅರಣ್ಯ ನಾಶ ಮುಂತಾದ ಮಾನವನ ಚಟುವಟಿಕೆಗಳಿಂದ ಈ
ಅನಿಲಗಳ ಪ್ರಮಾಣ ಸ್ವಾಭಾವಿಕ ಮಟ್ಟಕ್ಕಿಂತ ಬಹಳಷ್ಟು ಏರಿದೆ ಹಾಗೂ ಇನ್ನೂ ಏರುತ್ತಲಿದೆ.

ಈ ಉಷ್ಣತೆಯ ಮಟ್ಟ ಇನ್ನೂ ಹೆಚ್ಚಿಗೆ ಏರಿದರೆ ಕೆಳಗಿನ ಪರಿಣಾಮಗಳು ಉಂಟಾಗುತ್ತವೆ:

  • ಭೂಮಿಯ ಉಷ್ಣತೆ ಹೆಚ್ಚಿ ಕೆಲವು ಕಡೆಗೆ ಹವಾಮಾನ ವೈಪರೀತ್ಯಗಳಾಗಬಹುದು. ಎಂದರೆ ಕೆಲವು ಕಡೆಗೆ ತೀರ ಹೆಚ್ಚು ಬಿಸಿಲೇರಿದರೆ ಮತ್ತೆ ಕೆಲವು ಕಡೆಗೆ ತೀವ್ರ ಚಳಿಯುಂಟಾಗಬಹುದು. ವಿಪರೀತ ಮಳೆಯಾಗಿ ಪ್ರವಾಹವನ್ನುಂಟುಮಾಡಬಹುದು. ದೈತ್ಯ ಬಿರುಗಾಳಿ ಮತ್ತು ಸುಂಟರಗಾಳಿಗಳಾಗಿ ಅನೇಕ ಕಡೆಗೆ ಧನ ಮತ್ತು ಜನ ಹಾನಿಯುಂಟಾಗಬಹುದು.
  • ಭೂಮಿಯ ಹಿಮನದಿಗಳು ಮತ್ತು ಹಿಮಾಚ್ಛಾದಿತ ಶಿಖರಗಳು ಕರಗಿ ಸಮುದ್ರ ಸೇರಿ, ಸಮುದ್ರದ ಮಟ್ಟವೇರಿ ಅನೇಕ ಸಮುದ್ರದಂಚಿನ ಮಹಾನಗರಗಳು ನೀರಲ್ಲಿ ಮುಳುಗಬಹುದು. ಮಾಲ್ದೀವ್ಸ್‍ನಂತಹ ಸುಂದರವಾದ ದ್ವೀಪಗಳು ನೀರು ಪಾಲಾಗಬಹುದು.
  • ಹವಾಮಾನ ವೈಪರೀತ್ಯ ಮತ್ತು ಹೆಚ್ಚಿನ ಉಷ್ಣತೆಗಳ ಪರಿಣಾಮದಿಂದ ಭೂಮಿಯಲ್ಲಿರುವ ಸ್ವಾಭಾವಿಕ ಬೆಳೆಗಳ ನಾಶವಾಗಿ ತೀವ್ರವಾದ ಆಹಾರ ಕೊರತೆಯುಂಟಾಗಬಹುದು.
  • ಹೆಚ್ಚಿನ ಉಷ್ಣತೆಯಿಂದ ಭೂಮಿಯ ಜೀವ ವೈವಿಧ್ಯದಲ್ಲಿ ತೀವ್ರ ಬದಲಾವಣೆಯಾಗಬಹುದು. ಅನೇಕ ಜೀವಿಗಳ ಅವನತಿಯುಂಟಾದರೆ ಇನ್ನೂ ಅನೇಕ ಕ್ರಿಮಿ ಕೀಟಗಳ ಸಂಖ್ಯೆಯಲ್ಲಿ ಅಸಾಮಾನ್ಯ ಬೆಳವಣಿಗೆಯುಂಟಾಗಬಹುದು.
  •  ಈ ರೀತಿಯ ಏರುಪೇರುಗಳಿಂದ ಇಡೀ ಮಾನವ ಕುಲ, ರೋಗ ರುಜಿನಗಳು ಮತ್ತು ಆಹಾರ ಕೊರತೆಯಿಂದ ಬಳಲಿ ಮಾನವ ಸಂಕುಲವೇ ನಾಶವಾಗಬಹುದು.

ಈಗಾಗಲೇ ನಾವು ಈ ಹವಾಮಾನ ವೈಪರೀತ್ಯದ ವಿವಿಧ ಪರಿಣಾಮಗಳನ್ನು ಕಾಣುತ್ತಿದ್ದೇವೆ. ವಿಶ್ವದ ಅನೇಕ ಭಾಗಗಳಲ್ಲಿ ಉಷ್ಣತೆಯ ಮಟ್ಟ ತನ್ನ ಇಲ್ಲಿಯವರೆಗಿನ ಸಾಮಾನ್ಯ ಮಟ್ಟಕ್ಕಿಂತ ಮಹತ್ತರವಾಗಿ ಹೆಚ್ಚಾಗಿರುವುದನ್ನು ನಾವಿಂದು
ಕಾಣುತ್ತಿದ್ದೇವೆ. ಅಲ್ಲದೇ ಮಳೆಯ ಕೊರತೆ ಎಂದಿಗಿಂತ ಹೆಚ್ಚಾಗಿ ನೀರಿನ ಅಪಾರ ಕೊರತೆಯನ್ನು ಎದುರಿಸುತ್ತಿದ್ದೇವೆ. ಕಳೆದ ವರ್ಷದಲ್ಲಿಯೇ ಬಿಸಿಲಿನ ಪ್ರಕೋಪದಿಂದ ಅನೇಕ ಜನ ಮತ್ತು ಜಾನುವಾರುಗಳ ಪ್ರಾಣಹಾನಿಯುಂಟಾಗಿತ್ತು. ನೀರಿನ
ಅಭಾವದಿಂದ ಅನೇಕ ಪ್ರದೇಶಗಳಿಗೆ ನೀರಿನ ಸರಬರಾಜು ಮಾಡಲು ರೈಲುಗಳನ್ನು ಬಳಸಲಾಗಿತ್ತೆಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ.
ಹಿಂದೆಂದೂ ನೀರಿನ ಅಭಾವವನ್ನು ಎದುರಿಸದ ಪ್ರದೇಶಗಳಲ್ಲಿ ಕೂಡ ಈ ಸಮಸ್ಯೆಯುಂಟಾಗಿದ್ದನ್ನು ನೋಡಿದರೆ, ನಾವು ಈ ಭೂಮಿಯ ತಾಪಮಾನ ಏರಿಕೆಯ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕಾಗಿದೆ. ಈ ಬಾರಿ ಕೂಡ ಬಿಸಿಲು ತನ್ನ ಪ್ರತಾಪವನ್ನು ಆಗಲೇ ತೋರಿಸುತ್ತಿದೆ. ನನ್ನ ಊರು ಈ ಬಾರಿ ಕೂಡ ಮಾರ್ಚ್ ತಿಂಗಳಲ್ಲಿಯೇ ಬಿಸಿಲು 38 ಡಿಗ್ರಿ ಸೆಲ್ಸಿಯಸ್‍ಗೆ ತಲುಪಿದೆ. ಆದರೆ ಮಾನವನ ಆಧುನಿಕ ಚಟುವಟಿಕೆಗಳಿಂದಲೇ ಜಗತ್ತಿನ ಆರ್ಥಿಕ ಪ್ರಗತಿ ಸಾಧ್ಯ ಎನ್ನುವುದು ಕೂಡ ಸತ್ಯ. ಆದುದರಿಂದ ಈ ಆರ್ಥಿಕ ಪ್ರಗತಿ ಮತ್ತು ತಾಪಮಾನ ಏರಿಕೆಯಿಂದ ಭೂಮಿಯ ರಕ್ಷಣೆಯ ನಡುವೆ ಒಂದು ಯುದ್ಧ ಆರಂಭವಾಗಿದೆ. ವಾಣಿಜ್ಯ ಉದ್ದಿಮೆಗಳು ಮತ್ತು ಸರಕಾರಗಳು ಏರುತ್ತಿರುವ ಜನಸಂಖ್ಯೆ ಮತ್ತು ಆಧುನಿಕತೆಯ ಬೇಡಿಕೆಗಳನ್ನು ಪೂರೈಸುವುದರಲ್ಲಿ ಹೆಚ್ಚು ವ್ಯಸ್ತವಾಗಿದ್ದು, ತಮ್ಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿಲ್ಲ.
ಆದರೆ ಜಗತ್ತಿನ ಉಳಿವು ಆರ್ಥಿಕ ಅಭಿವೃದ್ಧಿಗಿಂತ ಹೆಚ್ಚು ಮುಖ್ಯ. ಜಗತ್ತೇ ಇರದಿದ್ದರೆ ಆರ್ಥಿಕ ಪ್ರಗತಿ ಎಂಥದು? ಈ ವಿಷಯದಲ್ಲಿ ಸುಮ್ಮನೇ ಮೀನ ಮೇಷ ಎಣಿಸುತ್ತ ಕುಳಿತುಕೊಂಡರೆ ನಮ್ಮ ಪರಿಸ್ಥಿತಿ ಕೂಡ ಆಧೊ ಗತಿ ಆಗುತ್ತದೆ.

ಪುಟ್ಟ ಬಾಲಕಿ ಗ್ರೆಟ ಥನ್ಬರ್ಗ್ , ಈ ಸಮಸ್ಯೆ ಕುರಿತು ಜಾಗತಿಕ  ಜಾಗೃತಿ ಮೂಡಿಸುತ್ತಿರುವಾಗ,ನಾವುಗಳೂ ಕೂಡ ನಮ್ಮ ಕೈಲಾಗುವ ಸಹಾಯ ಮಾಡಬೇಕು. ಆದಷ್ಟು ಇ೦ಧನದ ಬಳಕೆ ಕಡಿಮೆ ಮಾಡಬೇಕು. ಗಿಡ ಮರ ಹಸಿರು ಕಾಪಾಡಬೇಕು.ನಮ್ಮನ್ನು ಸಲಹುತ್ತಿರುವ ಭೂಮಿತಾಯಿಯನ್ನು ಕಾಪಾಡಿಕೊಳ್ಳಬೇಕು.ಅವಳಿ೦ದಲೆ ನಮ್ಮ ಉಳಿವು. ಇದು ಗೋಚರಿಸುವ ಸತ್ಯ.ಮು೦ದಿನ ಪೀಳಿಗೆ ಉಳಿಯಬೇಕಾದರೆ ನಾವು ಈ ಸತ್ಯವನ್ನರಿತು ಬಾಳಬೇಕು.ಇದನ್ನು ಪ್ರತಿ ಒಬ್ಬರಿಗೂ ಕಿವಿ ಮುಟ್ಟುವ೦ತೆ ತಿಳಿಸ ಬೇಕು. ಎಲ್ಲಾ ಶಾಲಾ ಮಕ್ಕಳಿಗು ಇದರ
ಆರಿವು ಮೂಡಿಸಬೇಕು. ಎಲ್ಲಾ ಮಾಧ್ಯಮ ,ಪತ್ರಿಕೆಗಳಲ್ಲೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು.ಹೀಗೆ ಈ ಸಮಸ್ಯೆಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಬೇಕು ಏಕೆ೦ದರೆ  ನಮ್ಮ ಉಳಿವು ಅಳಿವು ಈ ಭೂಮಿಯ ಕೈಲಿದೆ!!
-ಶ್ರಾವ್ಯ ಪಿ ಹ೦ದೆ
೮ ಏ
ಏಕ್ಯ ಜೆ ಪಿ ನಗರ

Posted by Ekya

Leave a reply

Your email address will not be published. Required fields are marked *